ಅಡಕಪುಟ್ಟನ ಗಿಡ

ನಿಕ್ಟಾಜಿನೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ. ಬೊಯೆರ್‍ಹಾವಿಯ ಇದರ ಶಾಸ್ತ್ರೀಯ ನಾಮ. ಹೂವಿನವರ್ಣ ವ್ಯತ್ಯಾಸಾನುಸಾರ ಇದರಲ್ಲಿ ಎರಡು ಪ್ರಭೇದಗಳನ್ನು ಗುರುತಿಸಬಹುದು. .
	
1. ಬೋಹರ್‍ಹಾವಿಯ ರಿಪೆನ್ಸ್, ವೆರೈಟಿ-ಡಿಪ್ಯೂಸಾ: ಇದನ್ನು ಬಿಳೀಕೊಮ್ಮೆ, ಬಳೆವಡಿಕೆ ಗಿಡ, ಸನಾಡಿಕಾ, ಅಡಕಪುಟ್ಟನ ಗಿಡ, ಶ್ವೇತಪುನರ್ನವ, ನೊನಜಾಲಿ ಗಣಜಲು ಎಂದೂ ಕರೆಯುತ್ತಾರೆ. 2. ಬೋಹರ್‍ಹಾವಿಯ ರಿಪ್ಯಂಡ : ಇದನ್ನು ಬೆಕ್ಕಿನ ಅಜ್ಜಿ ಬಳ್ಳಿ, ನಡುಮುರುಕನಬಳ್ಳಿ, ರಕ್ತಪುನರ್ನವ, ಕೆಂಪು ಗಣಜಲು ಎಂದೂ ಕರೆಯುತ್ತಾರೆ. 
	
ಭಾರತ ಹಾಗೂ ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳ ಹಲವಾರು ಪ್ರದೇಶಗಳಲ್ಲಿ ಈ ಗಿಡ ಬೇಲಿಯಲ್ಲೂ ಮತ್ತಿತರ ಪಾಳು ಜಮೀನುಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುತ್ತದೆ. ನೀರಿನ ಅನುಕೂಲತೆ ಇರುವೆಡೆ ವಿಶೇಷವಾಗಿ ಕಂಡುಬರುತ್ತದೆ.
	
ಇದೊಂದು ವಾರ್ಷಿಕ ಮೂಲಿಕೆ. ಗಿಡ ರೋಮಪೂರಿತವಾಗಿಯೊ ರೋಮರಹಿತವಾಗಿಯೊ 0.6-0.9 ಮೀ. ಎತ್ತರಕ್ಕೆ ಬೆಳೆಯುತ್ತದೆ. ಗಿಡ ಸಾಕಷ್ಟು ಕವಲೊಡೆದಿರುತ್ತದೆ; ಎಲೆಯ ಮೇಲ್ಭಾಗ ಹಸಿರಾಗಿಯೂ ಗಡಸಾಗಿಯೂ ಇದ್ದು ತಳಭಾಗ ಬಿಳುಪಾಗಿ ಮೃದುವಾಗಿರುತ್ತದೆ. ರೆಂಬೆಗಳಲ್ಲಿ ಅನೇಕ ಹೂಗಳು ಬರುತ್ತವೆ. ಇವು ಎಲೆಯ ಕಂಕುಳಿನಲ್ಲಿರುತ್ತವೆ. ಪ್ರಭೇದಕ್ಕನುಸಾರವಾಗಿ ಗಿಡಗಳು ಬಿಳಿ ಅಥವಾ ಕೆಂಪುಬಣ್ಣದ ಹೂ ಬಿಡುತ್ತವೆ. ಹಣ್ಣು 6 ಮಿ.ಮೀ. ಉದ್ದಕ್ಕಿದ್ದು ರಸಭರಿತವಾಗಿರುತ್ತದೆ. 
	
ಕಾಂಡದಲ್ಲಿ ಆನ್ತೋಸಯನಿನ್ ವರ್ಣಕಾರಕಗಳಿರುವುದರಿಂದ ಬಣ್ಣವಾಗಿರುತ್ತದೆ. ಎಲೆಗಳಲ್ಲಿ ಕಿತ್ತಳೆಬಣ್ಣದ ಸೂಜಿಯಾಕಾರದ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳಿವೆ. ಈ ಗಿಡದಲ್ಲಿ ಪುನರ್ನವೈನ್ ಎಂಬ ಒಂದು ಬಗೆಯ ಸಸ್ಯಕ್ಷಾರ ಅಥವಾ ಉದ್ರೇಕಕಾರಕ (ಆಲ್ಕಲಾಯ್ಡ್) ವಸ್ತುವಿರುತ್ತದೆ. ಇದು ಗಿಡದಲ್ಲಿ 0.01 ಭಾಗವಿದ್ದು ಇದರೊಡನೆ ಪೊಟ್ಯಾಸಿಯಂ ನೈಟ್ರೇಟ್ ಸಲ್ಫೇಟುಗಳು, ಕ್ಲೋರೈಡುಗಳು, ಮತ್ತು ಜಿಡ್ಡಿನ ಎಣ್ಣೆಗಳೂ ಸೇರಿಕೊಂಡಿರುತ್ತವೆ. ಈ ಗಿಡದ ಬೇರಿನಿಂದ ಚೂರ್ಣ, ಕಷಾಯ ತೈಲ ಮುಂತಾದ ಔಷಧಗಳನ್ನು ತಯಾರಿಸುತ್ತಾರೆ. 
	
ಪುನರ್ನವದ ಕಷಾಯವನ್ನು ಉದರ ಕ್ರಿಮಿನಾಶಕವಾಗಿಯೂ ಅಸ್ತಮಾ ರೋಗದಲ್ಲಿ ಕಫಹಾರಿಯಾಗಿಯೂ ಕಾಮಾಲೆರೋಗ, ಕೆಮ್ಮು, ಹಾಗೂ ಹಲ್ಲು ಮತ್ತು ಚರ್ಮರೋಗಿಗಳ ನಿವಾರಣೆಗೂ ಉಪಯೋಗಿಸುತ್ತಾರೆ. ಕಷಾಯ ಖಾರ ಹಾಗೂ ಕಹಿಯಾಗಿದ್ದು ಚೈತನ್ಯದಾಯಕವಾಗಿದೆ. ಪುನರ್ನವಾದ ತೈಲವನ್ನು ಅಭ್ಯಂಜನಕ್ಕೂ ಹೃದ್ರೋಗಗಳಿಗೂ ಮೇಹಸಂಬಂಧರೋಗಕ್ಕೂ ಶೋಭೆರೋಗಕ್ಕೂ ಉಪಯೋಗಿಸುವುದುಂಟು. ಪರಿಮಳವಸ್ತುಗಳ ತಯಾರಿಕೆಯಲ್ಲೂ ಇದರ ಬಳಕೆ ಇದೆ. ಪುನರ್ನವ ಲೇಹ್ಯವನ್ನು ಉರಿಮೂತ್ರ ಅಥವಾ ಅಲ್ಪಮೂತ್ರ ಕಾಯಿಲೆಗಳಿಗೂ ಕೊಡುತ್ತಾರೆ. ಈ ಔಷಧಿಗಳನ್ನು ಮಿತಿಮೀರಿ ತೆಗೆದುಕೊಂಡರೆ ವಾಂತಿಯಾಗುತ್ತದೆ.
      									           
 (ಎಚ್.ಕೆ.ಎಂ.)
      (ಪರಿಷ್ಕರಣೆ: ಕೆ.ಬಿ.ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ